ಕೆಜಿಎಫ್ನಲ್ಲಿ ಆಲ್ ಸೋಲ್ಸ್ ಡೇ ಭಕ್ತಿ, ಭಾವನಾಶ್ರುಗಳೊಂದಿಗೆ ಆಚರಣೆ
ಕೆಜಿಎಫ್: ಅಗಲಿದ ಬಂಧುಬಳಗದವರನ್ನು ನೆನೆದು ಅವರಿಗೆ ಗೌರವ ಸಲ್ಲಿಸುವ ಆಲ್ ಸೋಲ್ಸ್ ಡೇ ಭಾನುವಾರ ನಗರದ ವಿವಿಧ ಸ್ಮಶಾನಗಳಲ್ಲಿ ಭಕ್ತಿ, ಭಾವನಾಶ್ರು ಹಾಗೂ ಸಂಪ್ರದಾಯಗಳೊಂದಿಗೆ ನಡೆಯಿತು.
ನಗರದ ಕೋರಮಂಡೆಲ್, ಚಾಂಪಿಯನ್ ರೀಪ್ಸ್, ರೋಡ್ಗರ್ ಕ್ಯಾಂಪ್ ಹಾಗೂ ಕೃಷ್ಣಾವರಂ ಸ್ಮಶಾನ ಪ್ರದೇಶಗಳಲ್ಲಿ ಮುಂಜಾನೆಯಿಂದಲೇ ಸಾವಿರಾರು ಜನರು ಆಗಮಿಸಿ, ತಮ್ಮ ಪ್ರೀತಿಪಾತ್ರರ ಸಮಾಧಿಗಳನ್ನು ಸ್ವಚ್ಛಗೊಳಿಸಿ ಹೂವುಗಳು, ಪುಷ್ಪಗುಚ್ಛಗಳು, ಹಾರಗಳು ಹಾಗೂ ದೀಪಗಳಿಂದ ಅಲಂಕರಿಸಿದರು. ಕೆಲವೆಡೆ ದೀಪಾಲಂಕಾರಗಳಿಂದ ಕಂಗೊಳಿಸಿದ ಸ್ಮಶಾನಗಳು ರಾತ್ರಿ ಹತ್ತು ಗಂಟೆಯವರೆಗೂ ಭಕ್ತಿಯ ವಾತಾವರಣದಿಂದ ತುಂಬಿತ್ತು. ಜನರು ತಮ್ಮ ಅಗಲಿದ ಬಂಧುಗಳಿಗೆ ಇಷ್ಟವಾದ ತಿಂಡಿ, ತಿನಿಸುಗಳು, ಕೆಲವೆಡೆ ಮಾಂಸಾಹಾರ ಸೇರಿದಂತೆ ವಿಭಿನ್ನ ತಿಂಡಿ ತಿನಿಸುಗಳನ್ನು ಸಮಾಧಿಗಳ ಬಳಿ ಇಟ್ಟು ಪ್ರಾರ್ಥನೆ ಸಲ್ಲಿಸಿದರು. ಹಲವರು ಒಂದು ವಾರದ ಮೊದಲು ಸಮಾಧಿಗಳ ಸ್ವಚ್ಛತಾ ಕಾರ್ಯ ಆರಂಭಿಸಿದ್ದರು. ನಗರಸಭೆಯೂ ಎರಡು ದಿನಗಳಿಂದ ಎಲ್ಲ ಸ್ಮಶಾನಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡಿತ್ತು. ಚಿನ್ನದಗಣಿಗಳ ಕಾಲದಲ್ಲಿ ಕೆಜಿಎಫ್ ಪ್ರದೇಶದಲ್ಲಿ ಪರಂಗಿಯವರು ಪ್ರಾರಂಭಿಸಿದ ಈ ಸಂಪ್ರದಾಯ ಇಂದು ಸಾಂಸ್ಕೃತಿಕ ಸಂವೇದನೆಯ ಭಾಗವಾಗಿ ಬೆಳೆದಿದೆ.
ಕ್ರೈಸ್ತರು ಮಾತ್ರವಲ್ಲದೆ ಇಲ್ಲಿನ ಹಲವಾರು ಹಿಂದೂ ಕುಟುಂಬಗಳು ಸಹ ಈ ದಿನವನ್ನು ಆಚರಿಸುವುದು ವಿಶಿಷ್ಟವಾಗಿದೆ. ದೂರದ ಇಂಗ್ಲೆಂಡು ಸೇರಿದಂತೆ ಅನೇಕ ದೇಶಗಳಲ್ಲಿ ವಾಸಿಸುತ್ತಿರುವವರು ಇಲ್ಲಿ ಸಮಾಧಿಯಾಗಿರುವ ತಮ್ಮ ಪೂರ್ವಜರಿಗೆ ಪೂಜೆ ಸಲ್ಲಿಸಲು ಸ್ಥಳೀಯ ಸ್ನೇಹಿತರ ಅಥವಾ ಬಂಧುಗಳ ಸಹಾಯದಿಂದ ಏರ್ಪಾಟು ಮಾಡಿಸುತ್ತಾರೆ. ಇಲ್ಲಿಗೆ ಬರಲು ಸಾಧ್ಯವಾಗದವರು ಸ್ನೇಹಿತರ ಮೂಲಕ ತಮ್ಮ ಪೂರ್ವಿಕರ ಸಮಾಧಿಗಳನ್ನು ಸ್ವಚ್ಛಗೊಳಿಸಿ, ಅಲಂಕಾರ ಮಾಡಿ ಅವರು ಸೂಚಿಸುವ ಆಹಾರ ಪದಾರ್ಥಗಳನ್ನು ಇಡುವಂತೆ ತಿಳಿಸುತ್ತಾರೆ. ಚೆನ್ನೈ, ಅರಕೋಣ್ಣಂ, ಗುಡಿಯಾತ್ತಂ, ವೆಲ್ಲೂರು ಮುಂತಾದ ಕಡೆಗಳಲ್ಲಿ ನೆಲೆಸಿರುವವರು ಸಹಾ ಈ ಸಂದರ್ಭ ಕೆಜಿಎಫ್ಗೆ ಹಿಂದಿನ ದಿನವೇ ಆಗಮಿಸಿ ಅಗಲಿದ ಬಂಧುಗಳ ಸಮಾಧಿಗಳಿಗೆ ಪೂಜೆ ಸಲ್ಲಿಸಲು ಬಂದಿದ್ದರು. ಆಲ್ ಸೋಲ್ಸ್ ಡೇ ದಿನ ಸ್ಮಶಾನಗಳು ಕೇವಲ ದುಃಖದ ಸ್ಥಳಗಳಾಗಿರದೆ, ಕುಟುಂಬ ಬಂಧಗಳ, ಸ್ಮೃತಿಗಳ, ಮತ್ತು ಜೀವನದ ಅಮರ ಚಕ್ರದ ಭಾವಪೂರ್ಣ ನೆನಪಿನ ಪಾವನ ತಾಣಗಳಾಗಿ ಮಾರ್ಪಟ್ಟಿತ್ತು. ಪೊಲೀಸ್ ಇಲಾಖೆಯು ಎಲ್ಲಾ ಸ್ಮಶಾನಗಳ ಬಳಿ ಸೂಕ್ತ ಬಂದೋಬಸ್ತ್ ಏರ್ಪಾಟು ಮಾಡಿತ್ತು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
