ಕರ್ನಾಟಕ ರಾಜ್ಯ ರತ್ನ ಪ್ರಶಸ್ತಿಗೆ ಗಡಿನಾಡು ಕನ್ನಡ ಚಳುವಳಿ ಹೋರಾಟಗಾರ ಬಾ.ಹಾ. ಶೇಖರಪ್ಪ ಆಯ್ಕೆ
ಕೆಜಿಎಫ್,ಜೂ.೪: ಬೆಂಗಳೂರಿನ ಆತ್ಮಶ್ರೀ ಕನ್ನಡ ಪ್ರತಿಷ್ಠಾನವು ಕೊಡಮಾಡುವ ಪ್ರತಿಷ್ಠಿತ ಕರ್ನಾಟಕ ರಾಜ್ಯ ರತ್ನ ಪ್ರಶಸ್ತಿಗೆ ಗಡಿನಾಡು ಕನ್ನಡ ಚಳುವಳಿ ಹೋರಾಟಗಾರ, ಕೋಲಾರ ಜಿಲ್ಲೆಯ ಕನ್ನಡ ಶಕ್ತಿ ಕೇಂದ್ರದ ಅಧ್ಯಕ್ಷ ಬಾ.ಹಾ.ಶೇಖರಪ್ಪ ಅವರು ಆಯ್ಕೆಯಾಗಿದ್ದಾರೆ.
ಗಡಿನಾಡು ಕೆಜಿಎಫ್‌ನಲ್ಲಿ ಕನ್ನಡದ ಸರ್ವಾಂಗೀಣ ಅಭಿವೃದ್ದಿಗೆ ಶೇಖರಪ್ಪ ಅವರು ಸಲ್ಲಿಸಿರುವ ಕನ್ನಡದ ಸೇವೆಯನ್ನು ಗುರುತಿಸಿ ಬೆಂಗಳೂರಿನ ಆತ್ಮಶ್ರೀ ಕನ್ನಡ ಪ್ರತಿಷ್ಠಾನವು ಕರ್ನಾಟಕ ರಾಜ್ಯ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಪ್ರಶಸ್ತಿಯನ್ನು ಇದೇ ಮೊದಲ ಬಾರಿಗೆ ಬೆಂಗಳೂರು ಕನ್ನಡ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ರತ್ನ ಪ್ರಶಸ್ತಿ ಜೂನ್ ೭ ರಂದು ಶನಿವಾರ ಬೆಳಿಗ್ಗೆ ೧೦ ಗಂಟೆಗೆ ವ್ಯವಸ್ಥೆಯಾಗಿದೆ.
ಸುಮಾರು ೭೫ ವರ್ಷ ವಯಸ್ಸಿನ ಬಾ.ಹಾ.ಶೇಖರಪ್ಪ ಅವರು ಗಡಿನಾಡು ಕೋಲಾರ ಚಿನ್ನದ ಗಣಿ ಪ್ರದೇಶದಲ್ಲಿ ಕಳೆದ ೪೦ ವರ್ಷಗಳಿಂದ ನಿರಂತರ ನಾಡು ನುಡಿ ನೆಲ ಜಲ ಸಾಹಿತ್ಯ ಸಂಸ್ಕೃತಿಯ ಬೆಳವಣಿಗೆಗಾಗಿ ತನ್ನ ಸ್ವಂತ ಖರ್ಚಿನಲ್ಲಿ ಹೋರಾಟ ಮಾಡುತ್ತಾ ಬಂದಿದ್ದಾರೆ. ಕನ್ನಡ ಶಕ್ತಿ ಕೇಂದ್ರದ ಸ್ಥಾಪಕರಾದ ಡಾಕ್ಟರ್ ಎಂ ಚಿದಾನಂದಮೂರ್ತಿಗಳು ಶೇಖರಪ್ಪ ಅವರ ಗುರುಗಳಾಗಿದ್ದರು. ಬೆಮೆಲ್ ಕಾರ್ಖಾನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಬಾ.ಹಾ.ಶೇಖರಪ್ಪ ಅವರು ೨೦೧೦ರಲ್ಲಿ ಸೇವೆಯಿಂದ ವಯೋ ನಿವೃತ್ತಿ ಹೊಂದಿರುತ್ತಾರೆ.
ಕೋಲಾರ ಜಿಲ್ಲೆಯಲ್ಲಿ ಯಾವುದೇ ಕನ್ನಡ ಪರ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವರು. ಕೇಂದ್ರ ಸರ್ಕಾರಿ ಸ್ವಾಮ್ಯದ ಬೆಮೆಲ್ ನಲ್ಲಿ ಕಳೆದ ೧೯೯೫ ರಿಂದ ಹೋರಾಟದ ಫಲ ಎಲ್ಲೆಲ್ಲೂ ಕನ್ನಡ ನಿರ್ಮಾಣವಾಗಿದೆ. ತನ್ನ ನಿರಂತರ ಪ್ರಯತ್ನದಿಂದ ನಂದಿನಿ ಉತ್ಪನ್ನಗಳ ಮೇಲೆ ಪ್ರಧಾನವಾಗಿ ಕನ್ನಡ ಬರಲು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಕಾರದೊಂದಿಗೆ ಸಾಧ್ಯವಾಗಿದೆ. ಅದೇ ರೀತಿ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿ ಇರುವ ಬಹುಪಯೋಗಿ ಮಳಿಗೆಗಳ ಮೇಲೆ ಕನ್ನಡ ಪ್ರಧಾನವಾಗಿ ಬಿಂಬಿಸಲು ಸಾಧ್ಯವಾಗಿದೆ. ಮೈಸೂರು ಸೋಪ್ ಅಂಡ್ ಡಿಟರ್ಜೆಂಟ್ ರವರ ಉತ್ಪನ್ನಗಳ ಮೇಲೆ ಕನ್ನಡ ಭಾಷೆ ಪ್ರಧಾನವಾಗಿರಲು ಹೋರಾಟ ಮಾಡುತ್ತಿದ್ದಾರೆ.
ಬೆಮೆಲ್ ಪ್ರೌಢ ಶಾಲೆಯಲ್ಲಿ ಕನ್ನಡ ಪ್ರಥಮ ಭಾಷೆಯಾಗಿ ಕಲಿಸುವಂತಾಗಲು, ಕೇಂದ್ರೀಯ ವಿದ್ಯಾಲಯದಲ್ಲಿ ಕನ್ನಡ ಭಾಷೆ ಕಲಿಸಲು ಅವಕಾಶ ಕಲ್ಪಿಸುವುದು, ಕನ್ನಡ ಪ್ರವೇಶ, ಕಾವ ಮತ್ತು ಜಾಣ ಪರೀಕ್ಷೆಗಳನ್ನು ನಡೆಸುವಂತಾಗಲು ಸಾಧ್ಯವಾಗಿದೆ.
ಬಾ.ಹಾ.ಶೇಖರಪ್ಪ ಅವರು ಈಗಾಗಲೇ ಕಾಸರಗೋಡಿನ ಕರಾವಳಿ ಸಂಘದಿಂದ, ಬೀದರ್ ಹಾಗೂ ಹಂಪಿಯಲ್ಲಿ ಕೂಡ ತನ್ನ ಹೋರಾಟಕ್ಕೆ ಪ್ರಶಸ್ತಿ ದೊರೆತಿದೆ. ಅದೂ ಅಲ್ಲದೇ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಪ್ರಶಸ್ತಿ ಚಸೆರಾ ಪ್ರಶಸ್ತಿಯನ್ನು ಕಸಾಪ ಅಧ್ಯಕ್ಷರಾಗಿದ್ದ ಮನು ಬಳಿಗಾರ್ ಆಯ್ಕೆಮಾಡಿ ನಾಡಿನ ಹೆಸರಾಂತ ಕವಿ ಎಂ.ವಿ.ವೆಂಕಟೇಶಮೂರ್ತಿಯವರಿಂದ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.
ಕರ್ನಾಟಕ ರಾಜ್ಯ ರತ್ನ ಪ್ರಶಸ್ತಿಗೆ ಭಾಜನರಾಗಿರುವ ಬಾ.ಹಾ.ಶೇಖರಪ್ಪ ಅವರು ಗಡಿನಾಡು ಕೆಜಿಎಫ್‌ನ ಕನ್ನಡ ಸಂಘ, ಬಸವ ಸಮಿತಿ, ಕಸಾಪ, ಬೆಮೆಲ್ ಕನ್ನಡ ಮಿತ್ರರು ಮೊದಲಾದ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಪ್ರಸ್ತುತ ಕೋಲಾರ ಜಿಲ್ಲಾ ಕನ್ನಡ ಶಕ್ತಿ ಕೇಂದ್ರದ ಜಿಲ್ಲಾಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕ ರಾಜ್ಯ ರತ್ನ ಪ್ರಶಸ್ತಿಗೆ ಆಯ್ಕೆಯಾಗಿರುವ ಬಾ.ಹಾ. ಶೇಖರಪ್ಪ ಅವರನ್ನು ಹಲವಾರು ಸಂಘ ಸಂಸ್ಥೆಗಳವರು ಅಭಿನಂದಿಸಿದ್ದಾರೆ.
*ಚಿತ್ರಶೀರ್ಷಿಕೆ: ೦೪ಕೆಜಿಎಫ್೦೧: ಬಾ.ಹಾ.ಶೇಖರಪ್ಪ, ಕನ್ನಡ ಹೋರಾಟಗಾರರು.
What's Your Reaction?
Like
0
Dislike
0
Love
0
Funny
0
Angry
1
Sad
0
Wow
0
