ಕೆಜಿಎಫ್ ನ್ಯಾಯಾಲಯದಲ್ಲಿ ಡಿಸೆಂಬರ್ 13ರಂದು ಈ ವರ್ಷದ ಬೃಹತ್ ಲೋಕ ಅದಾಲತ್ ಶಿಬಿರ
ಕೆಜಿಎಫ್: ಘನ ಉಚ್ಚ ನ್ಯಾಯಾಲಯದ ನಿರ್ದೇಶನದಂತೆ, ವ್ಯಾಜ್ಯಗಳನ್ನು ಲೋಕ ಅದಾಲತ್ ಮುಖಾಂತರ ಇತ್ಯರ್ಥಗೊಳಿಸುವ ಕ್ರಮಕ್ಕೆ ಕೆಜಿಎಫ್ ನ್ಯಾಯಾಲಯ ಮುಂದಾಗಿದೆ. ಇದೇ ಹಿನ್ನೆಲೆಯಲ್ಲಿ ಡಿಸೆಂಬರ್ 13ರಂದು ಕೆಜಿಎಫ್ ನ್ಯಾಯಾಲಯದಲ್ಲಿ ಬೃಹತ್ ಲೋಕ ಅದಾಲತ್ ಶಿಬಿರ ಆಯೋಜಿಸಲಾಗಿದೆ ಎಂದು 3ನೇ ಅಡಿಷನಲ್ ಮತ್ತು ಹಿರಿಯ ನ್ಯಾಯಾಧೀಶ ಬಿ. ಶಿವಕುಮಾರ್ ತಿಳಿಸಿದ್ದಾರೆ. ಶನಿವಾರ ಬೆಳಿಗ್ಗೆ ನ್ಯಾಯಾಲಯದ ವಕೀಲರ ಸಂಘ ಭವನದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೌಟುಂಬಿಕ ಹಾಗೂ ಸಿವಿಲ್ ವಿಚಾರಣಾಧೀನ ಮತ್ತಿತರ ಪ್ರಕರಣಗಳನ್ನು ರಾಜಿ ಮೂಲಕ ಪರಿಹರಿಸುವತ್ತ ವಕೀಲರು ಸಹಕರಿಸಬೇಕು. ಕೋಲಾರ ಜಿಲ್ಲೆಯಲ್ಲಿ ಲೋಕ ಅದಾಲತ್ ಶಿಬಿರಗಳ ಮೂಲಕ ಅತಿ ಹೆಚ್ಚು ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಿರುವ ಘನತೆ ಕೆಜಿಎಫ್ ನ್ಯಾಯಾಲಯಕ್ಕೆ ಸಲ್ಲುತ್ತದೆ. ಇದೇ ಪರಂಪರೆಯನ್ನು ಮುಂದುವರೆಸಬೇಕು, ಇದಕ್ಕೆ ಎಲ್ಲಾ ವಕೀಲರು ಸಹಕರಿಸಬೇಕು ಎಂದು ಹೇಳಿದರು. ಇದೇ ವೇಳೆ ಕಕ್ಷಿದಾರರು ಸಹಾ ಈ ಶಿಬಿರದ ಮೂಲಕ ತಮ್ಮ ಪ್ರಕರಣಗಳನ್ನು ರಾಜಿ ಮೂಲಕ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು ಎಂದು ಕರೆಕೊಟ್ಟರು.
ಹಿರಿಯ ಸಿವಿಲ್ ನ್ಯಾಯಾಧೀಶೆ, ಪ್ರಧಾನ ಜಿಎಂಎಫ್ಸಿ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷೆ ಎನ್.ಬಿ. ಜಯಲಕ್ಷ್ಮಿ ಮಾತನಾಡುತ್ತಾ, ಕೌಟುಂಬಿಕ ಮತ್ತು ಸಾಮಾನ್ಯ ಸಿವಿಲ್, ಮತ್ತಿತರ ಪ್ರಕರಣಗಳಲ್ಲಿ ರಾಜಿ ಸಂಧಾನಕ್ಕೆ ವಕೀಲರು ಪ್ರಮುಖ ಪಾತ್ರವಹಿಸಬೇಕು. ಅಗತ್ಯವಿದ್ದಲ್ಲಿ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಸಮಿತಿ ಸಹಕಾರ ನೀಡಲು ಸಿದ್ದ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಡಿಷನಲ್ ಸಿವಿಲ್ ಜಡ್ಜ್ ಮುಜಫರ್ ಎ. ಮಂಜರಿ, ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಎಂ. ವಿನೋದ್ ಕುಮಾರ್, ಅಡಿಷನಲ್ ಸಿವಿಲ್ ಜಡ್ಜ್ ಕೆ. ಶೆಮಿದ ಉಪಸ್ಥಿತರಿದ್ದರು.
ವಕೀಲರ ಸಂಘದ ಅಧ್ಯಕ್ಷ ಎಸ್.ಎನ್. ರಾಜಗೋಪಾಲಗೌಡ ಮಾತನಾಡಿ, ಲೋಕ ಅದಾಲತ್ ಶಿಬಿರ ಯಶಸ್ವಿಯಾಗಲು ವಕೀಲರು ಸಂಪೂರ್ಣ ಸಹಕಾರ ನೀಡಲಿದ್ದಾರೆ. ಕಳೆದ ಶಿಬಿರಗಳಲ್ಲಿ ವಿಚ್ಛೇದನ ಕೋರಿ ಬಂದಿದ್ದ ದಂಪತಿಗಳನ್ನು ಮರುಮದುವೆ ಮೂಲಕ ಒಂದಾಗಿಸುವ ಮಾನವೀಯ ಕೃತ್ಯ ನ್ಯಾಯಾಧೀಶರು ನಿರ್ವಹಿಸಿದ್ದರು. ಇಂತಹ ಪ್ರಯತ್ನಗಳಲ್ಲಿ ವಕೀಲರು ಕೂಡ ಒಡೆದ ಮನಸ್ಸುಗಳನ್ನು ಒಂದಾಗಿಸುವ ಸೇತುವೆಯಾಗಬೇಕು ಎಂದರು. ಕಾರ್ಯಕ್ರಮದಲ್ಲಿ ವಕೀಲರ ಸಂಘದ ಪದಾಧಿಕಾರಿ ನಾಗರಾಜ್ ಹಾಗೂ ಅನೇಕ ವಕೀಲರು ಉಪಸ್ಥಿತರಿದ್ದರು. ವಕೀಲ ಮಣಿವಣ್ಣನ್ ಕಾರ್ಯಕ್ರಮ ನಿರೂಪಿಸಿದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
