ಕೋಡಿ ಮಠಕೆ ಗೃಹ ಸಚಿವರ ಭೇಟಿ
ಅರಸೀಕೆರೆ: ತಾಲೂಕಿನ ಸುಕ್ಷೇತ್ರ ಹಾರನಹಳ್ಳಿ ಕೋಡಿ ಮಠಕ್ಕೆ ಇಂದು ಮುಂಜಾನೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭೇಟಿ ನೀಡಿದ್ದರು.
ಅಚ್ಚರಿ ಎಂದರೆ ಬರೋಬ್ಬರಿ 1 ಗಂಟೆಗೂ ಹೆಚ್ಚು ಕಾಲ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಹಾಗೂ ಪರಮೇಶ್ವರ್ ಮಾತುಕತೆ ನಡೆಸಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ.
ಹೇಳಿ ಕೇಳಿ ರಾಜ್ಯ ರಾಜಕೀಯದಲ್ಲಿ ಅಧಿಕಾರ ಹಸ್ತಾಂತರ ವಿಚಾರ ನಿತ್ಯ ಸುದ್ದಿಯಾಗುತ್ತಿದೆ. ಮತ್ತೊಂದೆಡೆ ದಲಿತ ಸಿಎಂ ಕೂಗು ಸಹ ಪಿಸುಗುಡುತ್ತಿದೆ.
ಈ ಸಂದರ್ಭದಲ್ಲಿ ಸಚಿವರು, ಸ್ಥಳೀಯ ಶಾಸಕ ಕೆ.ಎಂ.ಶಿವಲಿಂಗೇಗೌಡ ಸೇರಿದಂತೆ ಯಾವೊಬ್ಬ ಸ್ಥಳೀಯ ಕಾಂಗ್ರೆಸ್ ಮುಖಂಡರಿಗಾಗಲೀ, ಅವರದೇ ಇಲಾಖೆಯ ಪೊಲೀಸ್ ಇಲಾಖೆಗೂ ಮಾಹಿತಿ ನೀಡದೆ ಏಕಾಂಗಿಯಾಗಿ ಬಂದು ಗೌಪ್ಯವಾಗಿ ಸ್ವಾಮೀಜಿಯವರೊಂದಿಗೆ ರಹಸ್ಯ ಮಾತುಕತೆ ನಡೆಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ರಾಜ್ಯದಲ್ಲಿ ಅದರಲ್ಲೂ ಕಾಂಗ್ರೆಸ್ ಪಕ್ಷದೊಳಗೆ ನಡೆಯುತ್ತಿರುವ ವಿದ್ಯಾಮಾನಕ್ಕೂ, ಕೋಡಿ ಶ್ರೀಗಳೊಂದಿಗೆ ಪರಮೇಶ್ವರ್ ಅವರು ದಿಢೀರ್ ಭೇಟಿ ನೀಡಿ ನಡೆಸಿದ ಮಾತುಕತೆಗೂ ಏನೋ ಇದೆ ಎಂಬ ಚರ್ಚೆ ನಡೆಯುತ್ತಿದೆ.
ಕೋಡಿ ಶ್ರೀಗಳು ಪ್ರಳಯ, ಮಳೆ, ರಾಜಕೀಯ ಅವಾಂತರ, ಏರಿಳಿತಗಳ ಬಗ್ಗೆ ತಾಳೆ ಭವಿಷ್ಯ ನುಡಿಯುವುದರಲ್ಲಿ ಪ್ರಖ್ಯಾತಿ ಗಳಿಸಿದ್ದಾರೆ. ಹೀಗಾಗಿ ಮುಂದಿನ ರಾಜಕೀಯ ಏನಾಗಲಿದೆ, ಎತ್ತ ಸಾಗಲಿದೆ ಎಂದು ತಿಳಿಯಲು ಸಚಿವರು ಸ್ವಾಮೀಜಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿರಬಹುದು ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ಏನೂ ಚರ್ಚೆ ನಡೆದಿಲ್ಲ: ಈ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸ್ವಾಮೀಜಿ, ಪರಮೇಶ್ವರ್ ಶ್ರೀ ಮಠದ ಸದ್ಭಕ್ತರು, ಆಗಾಗ ಮಠಕ್ಕೆ ಭೇಟಿ ನೀಡುತ್ತಾರೆ. ಅದೇ ರೀತಿ ಇಂದೂ ಸಹ ಮಠಕ್ಕೆ ಭೇಟಿ ನೀಡಿ ಶಿವಲಿಂಗಜ್ಜಯ್ಯ ಮತ್ತು ನೀಲಮ್ಮಜ್ಜಯ್ಯ ಗದ್ದುಗೆ ದರ್ಶನ ಮಾಡಿ ಪೂಜೆ ಸಲ್ಲಿಸಿದರು. ಇಷ್ಟು ಬಿಟ್ಟರೆ ಬೇರೆ ಯಾವುದೇ ಚರ್ಚೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರು. ಮುಂದುವರಿದು ಸಂಕ್ರಾಂತಿ ಬಳಿಕವಷ್ಟೇ ಭವಿಷ್ಯ ಹೇಳೋದು ಎಂದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
