ಬಸಮ್ಮ ಹಿರೇಮಠರ ಸಾಮಾಜಿಕ ಕಳಕಳಿಯ ಸುಜ್ಞಾನ ಸೌರಭ ಕೃತಿ

Jun 13, 2025 - 22:52
 0  7
ಬಸಮ್ಮ ಹಿರೇಮಠರ ಸಾಮಾಜಿಕ ಕಳಕಳಿಯ ಸುಜ್ಞಾನ ಸೌರಭ ಕೃತಿ

ಗೊರೂರು ಅನಂತರಾಜು, ಹಾಸನ

    ಸುಜ್ಞಾನ ಸೌರಭ ಆಧುನಿಕ ವಚನಗಳ ಸಂಕಲನ.

ಪ್ರಭುರಾಜೇಶಯ್ಯ ಅಂಕಿತ ನಾಮದಿಂದ ಪ್ರಭುರಾಜಸುತೆ ಕಾವ್ಯನಾಮದ ಡಾ: ಬಸಮ್ಮ ಹಿರೇಮಠರು ಬರೆದಿದ್ದು. ಇದರಲ್ಲಿ 60 ವಚನಗಳಿವೆ. ಇವರು ರಾಯಚೂರು ಜಿಲ್ಲೆ ದೇವದುರ್ಗ ತಾ. ನಾಗಡದಿನ್ನಿ ಹಿರೇಮಠದ ಚನ್ನಯ್ಯಸ್ವಾಮಿ ವೀರಮ್ಮ ದಂಪತಿಗಳ ಸುಪುತ್ರಿ. 1969ರಲ್ಲಿ ಜನಿಸಿದ ಇವರು ಪ್ರಸ್ತುತ ಬಾಲಕಿಯರ ಸಕಾ೯ರಿ ಫ್ರೌಢಶಾಲೆ ಸಿಂಧನೂರುನಲ್ಲಿ ಶಿಕ್ಷಕಿ. ಎಂ.ಎ. ಬಿಎಡ್ ಪದವಿಧರೆ. ಸಾಹಿತ್ಯ ಕೖಷಿಯಲ್ಲಿ ಕಥೆ, ಕವನ, ಲೇಖನ, ನಾಟಕ , ರುಬಾಯಿ, ಟಂಕಾ, ಮುಕ್ತಕ, ಗಜಲ್ ಹೀಗೆ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿದವರು. ಮೇಡಂ ನನಗೆ ಪರಿಚಿತರಾಗಿದ್ದು ಶಿವಮೊಗ್ಗದಲ್ಲಿ. ಹೂವಿನಹಡಗಲಿಯ ಮಧುನಾಯ್ಕ ಲಂಬಾಣಿ ಸಾರಥ್ಯದ ಕನಾ೯ಟಕ ರಾಜ್ಯ ಬರಹಗಾರರ ಸಂಘದಿಂದ ನಡೆದ ರಾಜ್ಯಮಟ್ಟದ ಸಾಹಿತ್ಯ ಕಾಯ೯ಕ್ರಮದಲ್ಲಿ. ಅಲ್ಲಿ ಇವರು ಈ ಪುಸ್ತಕ ಕೊಟ್ಟು ಓದಿ ಬರೆಯಬೇಕು ಎಂದರು. ಅದಾಗಿ ಹಲವು ದಿನಗಳ ನಂತರ ಬಿಡುವು ಮಾಡಿಕೊಂಡು ವಚನ ಓದಿದೆ. ಸಮಾಜಕ್ಕೆ ತಿಳಿ ಹೇಳುವ ಇಲ್ಲಿನ ವಚನಗಳು ಸರಳವಾಗಿ ಜನಸಾಮಾನ್ಯರು ಅರ್ಥ ಮಾಡಿಕೊಳ್ಳುವಂತೆ ಬಾಳೆ ಹಣ್ಣು ಸಿಪ್ಪೆ ಸುಲಿದ0ತೆ ಸುಲಲಿತವಾಗಿ ರಚನೆಗೊಂಡಿವೆ. 

ಜಲವಿಲ್ಲದ ನದಿ. ಎಲೆ ಇಲ್ಲದ ಮರ ಏಕಿರಬೇಕಯ್ಯ

ನಯವಿಲ್ಲದ ಮಾತು ಜ್ಞಾನವಿಲ್ಲದ ವಿದ್ಯೆ ಏಕಿರಬೇಕಯ್ಯ

ದಯವಿಲ್ಲದ ಧರ್ಮ ಗುಣವಿಲ್ಲದ ಮನುಜ ಏಕಿರಬೇಕಯ್ಯ.

ಮನುಜ ಮನುಜನಾಗಿ ಬಾಳದವನು ಮೂಢ 

ಏಕಿರಬೇಕಯ್ಯ

ಪ್ರಪಂಚದಲ್ಲಿ ಇಂತಹ ಮೂಢರೇ ಹೆಚ್ಚಿರುವಲ್ಲಿ ಮೇಡಂ ಪ್ರಶ್ನೆಗೆ ಉತ್ತರವಿದೆಯೇ? ತಾತ್ಪರ್ಯದಲ್ಲಿ ಮನುಜನಾದವನು ಮನುಜ ಮತದ ಗುಣಗಳನ್ನು ಬೆಳೆಸಿಕೊಂಡು ಮನುಜನಾಗಿ ಬಾಳುವುದೇ ಜೀವನ ಸಾರ್ಥಕ ಎನ್ನುತ್ತಾರೆ.

ಮುನ್ನುಡಿಯಲ್ಲಿ ಶ್ರೀ ವಿರುಪಾಕ್ಷ ಪಂಡಿತಾರಾಧ್ಯ, ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಕಲ್ಮಠ, ಮಾನ್ವಿ ರವರು ಬರೆದಂತೆ ನಮಗೆ ಹವಗುಣವನ್ನಾಗಲಿ, ನಮ್ಮ ಸುತ್ತಲಿರುವ ಜನರ ಗುಣವನ್ನಾಗಲಿ ನಿಯಂತ್ರಿಸಲು ಸಾಧ್ಯವಿಲ್ಲ. ಆದರೆ ಅವುಗಳ ಬಗ್ಗೆ ನಮ್ಮ ದೃಷ್ಟಿಕೋನವನ್ನು ನಿಯಂತ್ರಿಸಿಕೊಳ್ಳಬಹುದು. ಯಾವಾಗ ನಾವು ಏನನ್ನು ಯೋಚಿಸಬೇಕು ಎನ್ನುವುದನ್ನು ನಿದ೯ರಿಸುವ ಶಕ್ತಿ ನಮಗಿದೆ. ಎಲ್ಲದಕ್ಕೂ ಮನಸ್ಸೆ ಆಧಾರ.  

ಮನದ ಮೈಲಿಗೆ ಕಳಿಯಲು ಶಿವಶರಣರ

ವಚನಾನುಭವ ಸಿದ್ದಿಸಿಕೊಳ್ಳಬೇಕಯ್ಯ

ಮಹಾಜ್ಞಾನಿಯಾಗಲು ಶರಣ ದಾಸರ

ವಚನ ತತ್ಪಗಳ ಮಾರ್ಗದಿ ಸಾಗಬೇಕಯ್ಯ..

ಇದೇ ಮಾರ್ಗದಿ ಸಾಗಿ ಬಂದವರು. 

 ಬಹುಮುಖಿ

ಸಾಧನೆಯ ಶಿಕ್ಷಕಿ , ಸಾಹಿತಿ, ಪರಿಸರ ಪ್ರೇಮಿ, ಗೈಡ್ ಕ್ಯಾಪ್ಟನ್, ಸಮಾಜ ಸೇವಕಿ, ಸಂಘಟನಗಾರ್ತಿ. 

ಹಲವಾರು ಧಾರ್ಮಿಕ ಕ್ಷೇತ್ರಗಳಲ್ಲಿ ಆಧ್ಯಾತ್ಮಿಕ ಪ್ರವಚನ, ಉಪನ್ಯಾಸ ಮಾಡಿದ್ದಾರೆ. 

   10ನೆಯ ತರಗತಿಯಲ್ಲಿ ಇದ್ದಾಗಲೇ ಕವನ, ಕಥೆ ಬರೆಯುವ ಆಸಕ್ತಿ ಹವ್ಯಾಸ ಬೆಳೆಸಿಕೊಂಡವರು.  

     ಇವರು ಅಮೃತಸಾರ ಚೊಚ್ಚಲ ಕವನ ಸಂಕಲನವನ್ನು 1993 ರಲ್ಲಿ ಕನ್ನಡಮ್ಮನ ಮುಡಿಗೇರಿಸಿದರು. 2020ರಲ್ಲಿ ಪ್ರಕಟಿತ ಬದುಕಿನ ಬವಣೆ ಕವನ ಸಂಕಲನದ ಕವನಗಳು ಅನುಭವ ಅನುಭಾವ ಸಾರ.

ಜ್ಞಾನದ ಬೆಳಕು ಲೇಖನಗಳ ಸಂಕಲನ 2022ರಲ್ಲಿ ಪ್ರಕಟವಾಗಿದೆ.

 ‌‌ನಾಲ್ಕನೇ ಕೃತಿಯೇ 

ಸುಜ್ಞಾನ ಸೌರಭ.

 ಚುಟುಕು ಚಮತ್ಕಾರ,

ದಿಗ್ಧರ್ಶನ, 

ಆಡುತ ಕಲಿ,  

 ಆತ್ಮ ಸಿಂಚನ ಇವರ ಇತರ ಪ್ರಕಟಿತ ಕೃತಿಗಳು.

     1998 ರಿಂದ ಹಲವಾರು ವಿಜ್ಞಾನ ಚಿಂತನ ಪರೀಕ್ಷೆ,

ಗಣಿತ ಚಿಂತನ ಪರೀಕ್ಷೆ, ಕನ್ನಡ ನವೋದಯ ಪರೀಕ್ಷೆ, ವಚನ ಕಮ್ಮಟ ಪರೀಕ್ಷೆಗಳ ಜಿಲ್ಲಾ, ರಾಜ್ಯ ಮಟ್ಟದಲ್ಲಿ ಅತ್ಯುತ್ತಮ ‌ಬೋಧಕಿ, ಮಾರ್ಗದರ್ಶಕಿ ಪ್ರಶಸ್ತಿಗಳು ಲಭಿಸಿವೆ.

  2008ರಲ್ಲಿ ಶಿಕ್ಷಣ ಇಲಾಖೆ ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ನೀಡಿದೆ. 2020 ರಲ್ಲಿ ರಾಷ್ಟ್ರಮಟ್ಟದ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿ ಪ್ರಶಸ್ತಿ ಲಭಿಸಿದೆ. 

 ‌2021ರಲ್ಲಿ ಶ್ರೇಷ್ಠ ಶಿಕ್ಷಣ ರತ್ನ ಪ್ರಶಸ್ತಿ ಕರ್ನಾಟಕ ರಾಜ್ಯ ಬರಹಗಾರರ ಬಳಗ(ರಿ) ರಾಯಚೂರು ಜಿಲ್ಲಾ ಘಟಕ ನೀಡಿದೆ. 2023ರಲ್ಲಿ ಇದೇ ಬರಹಗಾರರ ಸಂಘ

 ‌‌ಸಾಹಿತ್ಯ ಸೌರಭ ರಾಜ್ಯ ಪ್ರಶಸ್ತಿ ನೀಡಿದೆ.  

 2024 ರಲ್ಲಿ ಸುರ್ವೆ ಕಲ್ಚರಲ್ ಅಕಾಡೆಮಿ ರಾಷ್ಟ್ರೀಯ ಶಿಕ್ಷಣ ರತ್ನ ರಾಷ್ಟ್ರ ಪ್ರಶಸ್ತಿ ನೀಡಿದೆ. 

ಓದಿನ ಮಧ್ಯೆ ಮೇಡಂಗೆ ಫೋನ್ ಮಾಡಲು ಈ ಸಾಧನೆ ಸನ್ಮಾನಗಳ ಪಟ್ಟಿ ಕಳಿಸಿದರು. 

ಮನ ಬುದ್ದಿ ಚಿತ್ತಗಳಿಂದ ಕಾಯಕವ ಮಾಡು

ಜನ ಸೇವೆಯೇ ಜನಾರ್ಧನ ಸೇವೆ ಮಾಡು

ಜನ ಮೆಚ್ಚುವ ಕಾರ್ಯವ ಮಾಡಬೇಕಯ್ಯ

ಮೇಡಂ ತಮ್ಮ ವಚನಗಳಲ್ಲಿ ಪ್ರತಿಪಾದಿಸಿದಂತೆ ತಾವು ನಡೆದುಕೊಂಡಿರುವುದು ಅವರ ಪರಿಚಯ ಓದಿ ತಿಳಿದೆ. ಒಂದಿಷ್ಟು ಮಾತ್ರ ಇಲ್ಲಿ ಉಲ್ಲೇಖಿಸಿದ್ದೇನಷ್ಟೇ..

ಒಮ್ಮನಸಿನ ಶುದ್ಧ ಕಾಯಕವ ಮಾಡು

ಸ್ವಾವಲಂಬನೆಯ ಬೀಜವ ಬಿತ್ತಿದೊಡೆ

ಸರ್ವರಲಿ ಸಮಬಾಳು ಬೆಳೆಯುವದಯ್ಯ

 ನಾವು ಮನವೆಂಬ ತೋಟದ ಗೇಟಿನಲ್ಲಿ ನಿಂತು ಒಳ್ಳೆಯ ವಿಚಾರಗಳನ್ನಷ್ಟೇ ಒಳಗೆ ಹೋಗಲು ಬಿಡಬೇಕೆಂದು ವಚನಗಳ ಮೂಲಕ ವಚನಗಾರ್ತಿ ಕರೆ ಕೊಟ್ಟಿದ್ದಾರೆ. ಒಂದೊಂದು ವಚನವು ಒಂದೊಂದು ತಾತ್ಪರ್ಯವನ್ನು ಒಳಗೊಂಡಿದೆ. ಸಮಾಜದ ಅಂಕು ಡೊಂಕುಗಳನ್ನು ಎತ್ತಿಹಿಡಿದು ಪರಿವರ್ತಿಸುವ ದಿಶೆಯಲ್ಲಿ ಆಧ್ಯಾತ್ಮಿಕ ಸಮಾಜಮುಖಿ ಪ್ರಸ್ತುತವಾಗಿವೆ..ಎಂಬ ಮುನ್ನುಡಿ ಮಾತು ಒಪ್ಪತಕ್ಕದ್ದೆ

ಮೂರು ದಿನದ ಬದುಕಿಗಾಗಿ

ಕಂಡ ಗಟ್ಟಲೆ ಸಂಪಾದನೆತಕಯ್ಯ

ಅಜ್ಞಾನವ ಹೊಡೆದೋಡಿಸಿ

ಸುಜ್ಞಾನ ಹಣತೆ ಹಚ್ಚಬೇಕಯ್ಯ

   --

ಗೊರೂರು ಅನಂತರಾಜು,

ಹಾಸನ

ಮೊ: 9449462879.

 ‌

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456