ಬೆಟ್ಟಗಳನ್ನು ಹಾವಿನಂತೆ ಬಳಸಿ ಹೊಳೆ ಹರಿಯುವುದು. ಬೆಟ್ಟದಿಂದ ಧುಮುಕಿ ದಟ್ಟಡವಿಯ ಮಧ್ಯೆ ದಾರಿ ಮಾಡಿಕೊಂಡು ಮುಂದುವರೆಯಿತು.
ಎತ್ತ ನೋಡಿದರು ಅರಣ್ಯ, ಕಡಿದಾದ ಬೆಟ್ಟಗಳು. ಇಲ್ಲಿ ಬ್ರಿಟಿಷ್ ಸವಾರನೊಬ್ಬ ದಾರಿ ತಪ್ಪಿ ಅಲೆಯುತ್ತಿದ್ದನು. ಅಲೆದು ಅಲೆದು ಸಾಕಾಗಿ, ಕುದುರೆಗೂ ಬಾಯಾರಿಕೆ ಬಂದು, ಅರಣ್ಯದ ನಡುವೆ ನೀರಿನ ಜುಳು ಜುಳು ಶಬ್ದವನ್ನು ಕೇಳಿಸಿಕೊಂಡು, ನೀರನ್ನು ಹುಡುಕಿಕೊಂಡು ಹೊರಟ ಅವನನ್ನು ಸ್ವಾಗತಿಸಿತು ಒಂದು ನದಿ. ವಿಶ್ರಮಿಸಿಕೊಳ್ಳುತ್ತಿದ್ದ ಅವನಿಗೆ ಎದುರಿನ ಬೆಟ್ಟಗಳಲ್ಲಿ ಗುಹೆಗಳಿರುವಂತೆ ಕಂಡಿತು. ಒಂದಲ್ಲ ಎರಡಲ್ಲ ಸಾಲು ಸಾಲು ಗುಹೆಗಳು. ಅನೇಕ ಗವಿಗಳನ್ನು ಬಂಡೆಗಳು ಮುಚ್ಚಿದ್ದವು. ಬ್ರಿಟಿಷ್ ಸವಾರ ಅಲ್ಲಿಂದ ವಾಪಸಾದನು. ಆದರೂ ಅವನಿಗೆ ಅಲ್ಲಿ ಏನಿದೆ ಎಂಬುದನ್ನು ನೋಡಬೇಕೆಂಬ ಕುತೂಹಲ ಅವನನ್ನು ಬಿಡಲಿಲ್ಲ. ಕೊನೆಗೆ ಒಂದು ದಿನ ಅನೇಕ ಕೆಲಸಗಾರರನ್ನು ಕರೆದುಕೊಂಡು ಮತ್ತೆ ಅಲ್ಲಿಗೆ ಬಂದನು. ಗುಹೆಗಳಿಂದ ತಡೆ ಬಂಡೆಗಳನ್ನು ಹೊರತೆಗೆದು, ಒಳ ಹೋಗಿ ಕತ್ತಲಿನಲ್ಲಿ ಬೆಳಕಿಟ್ಟು ನೋಡಿದನು. ಅವನ ಕಣ್ಣೆದುರಿಗೆ ಪ್ರಾಚೀನ ಭಾರತದ ಚಿತ್ರಕಲೆ ತಾನೇ ತಾನಾಗಿ ತೆರೆದುಕೊಂಡಿತು. ಕತ್ತಲು ಗುಹೆ ಕಲೆಯ ಬೀಡಾಗಿತ್ತು. ಇದು ನಡೆದದ್ದು 1818ರಲ್ಲಿ.
ಮಹಾರಾಷ್ಟ್ರ ರಾಜ್ಯದ ಔರಂಗಾಬಾದ್ ಜಿಲ್ಲೆಯಲ್ಲಿ ಅಜಂತ ಒಂದು ಸಣ್ಣ ಹಳ್ಳಿ. ಹಳ್ಳಿಯಿಂದ ಸುಮಾರು ಆರು ಕಿಲೋಮೀಟರ್ ದೂರದಲ್ಲಿ ವಾಘರ ನದಿ. ಬೆಟ್ಟಗಳ ನಡುವೆ ಚಂದ್ರನ ಆಕಾರದಲ್ಲಿ ನದಿ ಕೊರೆದಿರುವ ಕಮರಿಯಲ್ಲಿ ಅಡಗಿವೆ ಇಂದು ಜಗತ್ಪ್ರಸಿದ್ಧವಾಗಿರುವ ಅಜಂತ ಗುಹೆಗಳು.
ಸುಮಾರು ಒಂದುವರೆ ಸಾವಿರ ವರ್ಷಗಳ ಕೆಳಗೆ ಬೌದ್ಧ ಸನ್ಯಾಸಿಗಳು ಈ ಗುಹೆಗಳಿಗೆ ಹೋದರು. ಸ್ವಾಭಾವಿಕವಾಗಿದ್ದ ಗವಿಗಳನ್ನು ಆಳವಾಗಿ ಮಾಡಿ, ಜೊತೆಗೆ ಹೊಸ ಗವಿಗಳನ್ನೂ ಅವರು ಕೊರೆದರು.
ಅಜಂತದಲ್ಲಿ ಒಟ್ಟು 29 ಗವಿಗಳಿವೆ. ಇವುಗಳಲ್ಲಿ ಮಧ್ಯದಲ್ಲಿರುವ ಗವಿಗಳು ಅತ್ಯಂತ ಪ್ರಾಚೀನವಾದವು. ಇವುಗಳ ಎಡಕ್ಕೂ ಬಲಕ್ಕೂ ಇರುವ ಗವಿಗಳು ಅನಂತರ ಕೆತ್ತಲ್ಪಟ್ಟವು.
ಅಜಂತದಲಿರುವ ಎಲ್ಲಾ ಗವಿಗಳ ಒಳಗೂ ಚಿತ್ರಗಳನ್ನು ಬರೆದಿದ್ದರೂ, ಆರು ಗವಿಗಳಲ್ಲಿ ಮಾತ್ರ ಅವು ಇಂದು ಕಾಣುತ್ತವೆ. ಬಲದಿಂದ ಎಡಕ್ಕೆ 1, 2, 9, 10, 16, 17 ಗುಹೆಗಳಲ್ಲಿ ಕೆಲವು 24.4 ಮೀಟರ್ ಚೌಕ ಇವೆ. ಇವುಗಳ ಗೋಡೆಗಳ ಮೇಲೂ ಚಾವಣಿಗಳ ಮೇಲೂ ಅನೇಕ ಚಿತ್ರಗಳಿವೆ. ಇವುಗಳಲ್ಲಿ ಬಹುಬಾಗ ಬುದ್ದನ ಜೀವನಕ್ಕೆ ಸಂಬಂಧಿಸಿದ ಹಾಗೂ ಬುದ್ಧನ ಜಾತಕ ಕಥೆಗಳು.
ಇಲ್ಲಿನ ಚಿತ್ರಗಳಲ್ಲಿ ನಾವು ಗಿಡಮರಗಳನ್ನೂ ಪಶು ಪಕ್ಷಿಗಳನ್ನೂ, ಸುಂದರ ಅರಮನೆಯ ದೃಶ್ಯಗಳನ್ನೂ, ಮನೆ ಪಟ್ಟಣಗಳನ್ನೂ ನೋಡಬಹುದು. ಇವುಗಳ ಮಧ್ಯೆ ತಮ್ಮ ಭಾವರಾಗಗಳನ್ನು ಒಡಮೂಡಿಸಿರುವ ಗಂಡಸರು, ಹೆಂಗಸರು, ಮಕ್ಕಳ ಚಿತ್ರಗಳು. ಇವೆಲ್ಲದರ ಮಧ್ಯದಲ್ಲಿ ದಯಾನಧಿ ಬುದ್ಧನ ಧ್ಯಾನಾಸಕ್ತ ಬುದ್ಧನ ಚಿತ್ರಗಳು ಇವೆ.
ಅಜಂತ ಚಿತ್ರಕಲೆಯಲ್ಲಿ ಪ್ರಧಾನವಾಗಿ ಚಿತ್ರಿತವಾಗಿರುವುದು ವೈರಾಗ್ಯ ಭಾವ. ಆದರೂ ಇಲ್ಲಿನ ಚಿತ್ರಕಾರರಿಗೆ ಜೀವನದ ಎಲ್ಲಾ ಭಾವ ರಾಗಗಳ, ರಸಗಳ ಪರಿಚಯವಿತ್ತೆಂಬುದು ಸ್ಪಷ್ಟವಾಗುತ್ತದೆ.
ಅಜಂತದ ಗವಿಗಳಲ್ಲಿ ಎರಡು ವಿಧ; ಒಂದು ಚೈತ್ಯ ಅಥವಾ ಆರಾಧನಾ ಮಂದಿರ; ಇನ್ನೊಂದು ವಿಹಾರ ಅಥವಾ ಮಠ. ಚೈತ್ಯಗಳಲ್ಲಿ ಬುದ್ಧನ ಆರಾಧನೆಗೆ ಪ್ರಾಮುಖ್ಯ ಹೆಚ್ಚು. ಇವುಗಳಲ್ಲಿ ಸ್ತೂಪಗಳಿವೆ. ಇವನು ಕಟ್ಟಿರುವ ರೀತಿ ಹೇಗಿದೆ ಎಂದರೆ ದಿನದಲ್ಲಿ ಯಾವಾಗಲಾದರೂ ಒಮ್ಮೆ ಸೂರ್ಯನ ಬೆಳಕು ಇಡೀ ಗುಹೆಯನ್ನು ಬೆಳಗುತ್ತದೆ.
ಅತ್ಯಂತ ಪ್ರಸಿದ್ಧವಾಗಿರುವ ಪದ್ಮ ಪಾಣಿ ಬುದ್ಧನ ಚಿತ್ರವಿರುವುದು ಮೊದಲನೆಯ ಗುಹೆಯೊಳಗೆ, ಎರಡನೆಯ ಗವಿಯಲ್ಲಿರುವ ಬುದ್ಧ ಜನನ ಇನ್ನೊಂದು ರಮ್ಯ ಚಿತ್ರ.
17ನೆಯ ಗವಿಯಲ್ಲಿರುವ ಒಂದು ಚಿತ್ರ ಅನೇಕರ ಗಮನ ಸೆಳೆದಿದೆ. ಬಿಕ್ಷುವಾಗಿ ಬುದ್ಧ ತನ್ನ ಮನೆಯ ಬಾಗಿಲಿಗೆ ಬಂದಾಗ ಅವನಿಗೆ ಭಿಕ್ಷೆ ನೀಡಲು ಮಗ ರಾಹುಲನೊಂದಿಗೆ ಯಶೋಧರೆ ನಿಂತಿರುವ ಚಿತ್ರ. ಇಲ್ಲಿ ಬುದ್ಧನ ಶಾಂತಿ, ಕರುಣೆ, ವೈರಾಗ್ಯ, ಯಶೋಧರೆಯ ಮುಖದಲ್ಲಿನ ಭಯ, ಭಕ್ತಿ, ರಾಹುಲನ ಕುತೂಹಲ ಮನಮೋಹಕವಾಗಿದೆ.
21ನೆಯ ಗವಿಯಿಂದ 29 ರವರೆಗಿನ ಗವಿಗಳು ಬುದ್ಧನ ಅನಂತರ ಪೂಜೆಗೆ, ಆರಾಧನೆಗೆ ಪ್ರಾಮುಖ್ಯ ನೀಡಿದ ಮಹಾಯಾನ ಪಂಥಕ್ಕೆ ಸೇರಿದಂತವು. ಇವುಗಳಲ್ಲಿ 26ನೆಯದು 21 ಮೀಟರ್ ಉದ್ದದ ಆರಾಧನಾ ಮಂದಿರ ಇಲ್ಲಿ ದೇಹ ತ್ಯಾಗ ಮಾಡುತ್ತಾ ಮಲಗಿರುವ ಬುದ್ಧನ ಬಹಳ ದೊಡ್ಡ ಶಿಲ್ಪವಿದೆ.
ಅಜಂತದಲಿನ ಚಿತ್ರಕಲೆಯ ರಚನೆ; ಮೊದಲು ಕಲ್ಲಿನ ಗೋಡೆಗಳನ್ನು ಸಮಪಡಿಸಿದ್ದಾರೆ. ಮರಳು, ಧಾತುಮಿಶ್ರಿತ ಮಣ್ಣು, ಬತ್ತದ ಹುಲ್ಲು ಅಥವಾ ಹೊಟ್ಟು, ಪಾಚಿ, ಕಪ್ಪೆ ಚಿಪ್ಪು ಮುಂತಾದವನ್ನು ಬೆಲ್ಲದ ನೀರಿನಲ್ಲಿ ಆರು ತಿಂಗಳು ನೆನೆಸಿ ಗಾರೆಯನ್ನು ಸಿದ್ಧಮಾಡಿಕೊಂಡಿದ್ದಾರೆ. ಇದನ್ನು ಗೋಡೆಗೆ ಹಚ್ಚಿ ಅದು ಆರುವುದಕ್ಕೆ ಮೊದಲು ಧಾತುರಾಗದ ಕಡ್ಡಿಗಳಿಂದ ಚಿತ್ರಗಳ ರೇಖೆ ಗುರುತು ಮಾಡಿಕೊಂಡು, ಅನಂತರ ಅವುಗಳಿಗೆ ಬಣ್ಣ ಹಾಕಿದ್ದಾರೆ. ಇದರಿಂದ ಒಣಗುವುದಕ್ಕೆ ಮೊದಲೇ ಬಣ್ಣ ಹಚ್ಚಿದ ಇವು ಎರಡು ಸಾವಿರ ವರ್ಷಗಳಾದ ಮೇಲೂ ಉಳಿದಿವೆ.
ಅಜಂತ ಚಿತ್ರಕಲೆಗೆ ಹೆಸರಾದಂತೆ ವಾಸ್ತುಶಿಲ್ಪಕ್ಕೆ ಹೆಸರಾದದ್ದು ಎಲ್ಲೋರ. ಇದು ದೇವಗಿರಿ ಕೋಟೆಯಿಂದ 10 ಕಿ.ಮೀ., ಅಜಂತಾದಿಂದ ಸುಮಾರು 161 ಕಿಲೋಮೀಟರ್ ದೂರದಲ್ಲಿದೆ. ಅಜಂತ ಇರುವುದು ಬೆಟ್ಟಗಳ ನೈರುತ್ಯ ಕೊನೆಯಲ್ಲಿ. ಎಲ್ಲೋರವಿರುವುದು ವಾಯುವ್ಯ ಕೊನೆಯಲ್ಲಿ. ಎಲ್ಲೋರವೆಂಬ ಸಣ್ಣ ಹಳ್ಳಿಯ ಹತ್ತಿರ ಸುಮಾರು 91 1/2 ಮೀಟರ್ ಗಳ ಎತ್ತರವಿರುವ ಘಟ್ಟಗಳಲ್ಲಿವೆ. ಎಲ್ಲೋರಾದ ಗುಹೆಗಳು ಇಲ್ಲಿ 33 ಗವಿಗಳನ್ನು ಸುಮಾರು ಎರಡೂವರೆ ಕಿಲೋಮೀಟರ್ ಉದ್ದ ಕೊರೆಯಲಾಗಿದೆ.
ಅಜಂತ ಗುಹೆಗಳು ಸಂಪೂರ್ಣವಾಗಿ ಬೌದ್ಧ ಧರ್ಮಕ್ಕೆ ಮೀಸಲಾದ ಗವಿಗಳು. ಆದರೆ ಎಲ್ಲೋರಾದಲ್ಲಿ ಬೌದ್ಧ ಗುಹೆಗಳೂ, ಹಿಂದೂ ಗುಹೆಗಳೂ, ಜೈನ ಗುಹೆಗಳೂ ಇವೆ. ಬೌದ್ಧ ಗವಿಗಳನ್ನು 400 ರಿಂದ 600 ರವರೆಗೆ, ಹಿಂದು ಗುಹೆಗಳನ್ನು ಸುಮಾರು 600 ರಿಂದ 800 ರವರೆಗೆ, ಜೈನ ಗುಹೆಗಳನ್ನು 800 ರಿಂದಲೂ ಕೊರೆದಿರಬೇಕು. ಎಲ್ಲೂರಾದ ಬೌದ್ಧ ಗವಿಗಳಲ್ಲಿ ವಿಹಾರಗಳೇ ಹೆಚ್ಚು.
ಬೌದ್ಧ ಧರ್ಮದ ಅನಂತರ ಪ್ರಾಶಸ್ತ್ಯ ಕ್ಕೆ ಬಂದ ಶೈವ ಧರ್ಮದ ಪ್ರತೀಕವಾಗಿದೆ ಎಲ್ಲೋರಾದ ಪ್ರಸಿದ್ಧ ಕೈಲಾಸ ದೇವಾಲಯ. ಇದನ್ನು ಒಂದೇ ಬಂಡೆಯಲ್ಲಿ ಕೆತ್ತಿದ್ದಾರೆ. ಕೆತ್ತಿಸಿದವನು ರಾಷ್ಟ್ರಕೂಟ ವಂಶದ ಮೊದಲನೆಯ ಕೃಷ್ಣರಾಜ. ಇದಾದ ಮೇಲೆ ಜೈನ ಮತ ಪ್ರಾಶಸ್ತ್ಯ ಕ್ಕೆ ಬಂದಾಗ ಎಲ್ಲೋರಾದ ಜೈನಗವಿಗಳು ಕೊರೆಯಲ್ಪಟ್ಟವು. ಈ ಜೈನ ಗವಿಗಳಲ್ಲಿ ಅತ್ಯಂತ ರಮಣೀಯವಾದದ್ದು ಇಂದ್ರ ಸಭೆ ಎಂಬ ಗವಿ.
ಅಜಂತ, ಎಲ್ಲೋರ ಗವಿಗಳು ಭಾರತೀಯ ಶಿಲ್ಪ ಕಲೆಗೂ, ವಾಸ್ತುಶಿಲ್ಪಕ್ಕೂ, ಚಿತ್ರಕಲೆಗೂ ಅತಿ ಶ್ರೇಷ್ಠ ನಿದರ್ಶನಗಳಾಗಿವೆ. ಪಾಳು ಬೀಳುತ್ತಿದ್ದ ಈ ಗವಿಗಳನ್ನು ಈಗ ರಾಷ್ಟ್ರೀಯ ಸ್ಮಾರಕಗಳಾಗಿ ಉಳಿಸಿಕೊಂಡು ಬರಲಾಗುತ್ತಿದೆ. ಅಜಂತದ ಕಲಾ ವೈಭವ ಬಂಗಾಳದ ಅವನೀಂದ್ರನಾಥ ಠಾಕೂರ್, ನಂದಲಾಲ್ ಬೋಸ್, ಅಶಿತ್ ಕುಮಾರ್ ಹಾಲ್ದಾರ್, ಕ್ಷಿತಿ ಮುಜುಮ್ದಾರ್, ಕರ್ನಾಟಕದ ಕೆ. ವೆಂಕಟಪ್ಪ ಇವರ ಚಿತ್ರಕಲೆಗೆ ಸ್ಪೂರ್ತಿ ನೀಡಿದೆ.
ಉದಂತ ಶಿವಕುಮಾರ
ಲೇಖಕರು, ಬೆಂಗಳೂರು-560056
ಮೊ : 9739758558