ಜವಾಹರ್ ನವೋದಯ ವಿದ್ಯಾಲಯದಲ್ಲಿ ಮಾದರಿ ಯುವ ಗ್ರಾಮ ಸಭೆ, ಪೌರಪ್ರಜ್ಞೆ ಬೆಳೆಸುವ ಸಾರ್ಥಕ ಪ್ರಯತ್ನ
ವಕ್ಕಲೇರಿ: ಕೋಲಾರ ಜಿಲ್ಲೆಯ ವಕ್ಕಲೇರಿಯ ಜವಾಹರ್ ನವೋದಯ ವಿದ್ಯಾಲಯದಲ್ಲಿ ಮಂಗಳವಾರ ನಡೆದ ಮಾದರಿ ಯುವ ಗ್ರಾಮ ಸಭೆ ವಿದ್ಯಾರ್ಥಿಗಳಲ್ಲಿ ಸ್ಥಳೀಯ ಆಡಳಿತ ವ್ಯವಸ್ಥೆಯ ಕುರಿತು ಗಾಢ ಅರಿವು ಮೂಡಿಸಿತು. ಪಂಚಾಯತ್ ರಾಜ್ ಸಚಿವಾಲಯದ ಮುಂದಾಳತ್ವದಲ್ಲಿ, ಶಾಲಾ ಶಿಕ್ಷಣ, ಸಾಕ್ಷರತಾ ಇಲಾಖೆ ಹಾಗೂ ಗಿರಿಜನ ವ್ಯವಹಾರಗಳ ಸಹಭಾಗಿತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನೈಜ ಗ್ರಾಮ ಸಭೆಯ ಪ್ರಕ್ರಿಯೆಯನ್ನು ಅಣಕವಾಗಿ ಪ್ರದರ್ಶಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಚೌಡೇಶ್ವರಿ ವಿದ್ಯಾರ್ಥಿಗಳ ಪ್ರದರ್ಶನವನ್ನು ಮೆಚ್ಚಿ ಮಾತನಾಡುತ್ತಾ, ವಿದ್ಯಾರ್ಥಿಗಳು ತೋರಿಸಿದ ಅಣಕು ಗ್ರಾಮ ಸಭೆಯು ನೈಜ ಜೀವನದಲ್ಲಿ ನಡೆದರೆ, ಗ್ರಾಮಗಳು ಹಾಗೂ ದೇಶ ಪ್ರಗತಿಪಥದಲ್ಲಿ ನಿರ್ವಿವಾದವಾಗಿ ಮುನ್ನಡೆಯುತ್ತವೆ. ಇಂತಹ ಅರಿವು ಹೊಂದಿ ಬೆಳೆದ ಯುವಕರು ದೇಶವನ್ನು ಉನ್ನತ ಶಿಖರಕ್ಕೆ ಕೊಂಡೊಯ್ಯುವ ಸಾಮರ್ಥ್ಯ ಹೊಂದಿರುವರು, ಎಂದರು. ಶಿಕ್ಷಕ ವೃಂದದ ಪರಿಶ್ರಮವನ್ನೂ ಶ್ಲಾಘಿಸಿದ ಅವರು, ಪ್ರತಿಭಾವಂತರನ್ನು ರೂಪಿಸುವ ನವೋದಯ ವಿದ್ಯಾಲಯದ ಶೈಕ್ಷಣಿಕ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ವಿದ್ಯಾಲಯದ ಪ್ರಾಸ್ತಾವಿಕ ಮಾತುಗಳನ್ನಾಡಿದ ಶಿಕ್ಷಕ ಜಿ. ಪ್ರಕಾಶ್ ಗ್ರಾಮ ಪಂಚಾಯಿತಿ ವ್ಯವಸ್ಥೆಯ ಇತಿಹಾಸ, ಪ್ರಾಚೀನತೆ, ಕಾರ್ಯಪದ್ಧತಿ ಮತ್ತು ಗ್ರಾಮ ಸಭೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ಸವಿಸ್ತಾರವಾಗಿ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಈ. ಉಮಾಪತಿರೆಡ್ಡಿ, ಪೌರಪ್ರಜ್ಞೆ ಬೆಳೆಸುವುದರಲ್ಲಿ ಇಂತಹ ಮಾದರಿ ಗ್ರಾಮ ಸಭೆಗಳು ಮಹತ್ವದ ಪಾತ್ರ ವಹಿಸುತ್ತವೆ. ಹಕ್ಕು ಮತ್ತು ಕರ್ತವ್ಯಗಳ ಅರಿವಿನ ಜೊತೆ ದೇಶದ ಜವಾಬ್ದಾರಿಯುತ ನಾಗರಿಕರಾಗಲು ಈ ತರಬೇತಿಗಳು ವಿದ್ಯಾರ್ಥಿಗಳಿಗೆ ಬುನಾದಿಯಾಗುತ್ತವೆ, ಎಂದು ಹೇಳಿದರು.
ಉಪಪ್ರಾಚಾರ್ಯೆ ಆರ್. ಉಮಾ ಅವರ ಮಾರ್ಗದರ್ಶನದಲ್ಲಿ ನಡೆದ ಈ ಮಾದರಿ ಗ್ರಾಮ ಸಭೆಯಲ್ಲಿ ಸುಮಾರು 40 ವಿದ್ಯಾರ್ಥಿಗಳು ಸದಸ್ಯರ ವಿವಿಧ ಪಾತ್ರಗಳನ್ನು ನಿರ್ವಹಿಸಿ ಸಕ್ರಿಯವಾಗಿ ಭಾಗವಹಿಸಿದರು. ಅರವಿಂದ್ ಕುಮಾರ್ ಮೆಹರ, ಎಂ. ಬಾಬು ಮತ್ತು ಪ್ರಕಾಶ್ ಜಿ. ವಿದ್ಯಾರ್ಥಿಗಳನ್ನು ತರಬೇತುಗೊಳಿಸಿದ್ದರು.
ಕು. ಗಗನ ಮತ್ತು ಕು. ಜ್ಞಾನವಿ ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿಗಳ ನಾಗರಿಕ ಜಾಗೃತಿ ಮತ್ತು ನೈಜ ಜನತಾಂತ್ರಿಕ ಪ್ರಕ್ರಿಯೆಯ ಅರಿವಿಗೆ ದಾರಿತೋರುವ ಈ ಕಾರ್ಯಕ್ರಮ, ನವೋದಯ ವಿದ್ಯಾಲಯದ ಮತ್ತೊಂದು ಗಣನೀಯ ಪ್ರಯತ್ನವಾಗಿ ಗುರುತಿಸಲ್ಪಟ್ಟಿದೆ.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
