"ನೃತ್ಯದ ಹೆಜ್ಜೆಯ ಗೆಜ್ಜೆನಾದದೊಳಗೆ ಒಂದು ಸುತ್ತಿನ ನೋಟ"
ಒಮ್ಮೆಯಾದರೂ ಕುಣಿಯದ ಮಾನವನೇ ಇಲ್ಲ ಎಂದರೆ ತಪ್ಪಾಗದು. ಪ್ರತಿಯೊಬ್ಬ ವ್ಯಕ್ತಿಯು ಎಳೆಯ ವಯಸ್ಸಿನಲ್ಲಿಯಾದರೂ, ಅತ್ಯಂತ ಸಂತೋಷವಾದಾಗ ಒಮ್ಮೆಯಾದರೂ ಕುಣಿದೇ ಇರುತ್ತಾನೆ. ನೃತ್ಯ ಮಾನವ ಸಹಜ ಧರ್ಮ.
ತೆನೆಯಿಂದ ತುಂಬಿದ ಬತ್ತದ ಹೊಲ. ಪ್ರಕೃತಿಯ ಈ ವರದಾನದಿಂದ ರೈತನಿಗೆ ಹಿಗ್ಗು. ಕುಣಿಯುವಂತೆ ಪ್ರೇರೇಪಿಸುವ ಮೈಮನಗಳು. ಪ್ರಕೃತಿಯ ಮಡಿಲಲ್ಲಿ ಬೆಳೆದ ಪ್ರಾಚೀನ ಮಾನವ, ತನ್ನ ಎಲ್ಲಾ ಅವಶ್ಯಕತೆಗಳಿಗೂ ಪ್ರಕೃತಿಯನ್ನೇ ಅವಲಂಬಿಸಿದ್ದ. ಮಳೆ ಬಾರದೆ ಭೂಮಿಯಲ್ಲ ಒಣಗಿ ಬಿರುಕು ಬಿಟ್ಟಾಗ ಮಾನವ ಮಳೆಗಾಗಿ ಹಂಬಲಿಸಿದ; ಮೋಡ ತನ್ನಲ್ಲಿರುವ ಮಳೆಯನ್ನು ಸುರಿಸಿ ಭೂಮಿಯನ್ನು ತಣಿಸಿದಾಗ ಹೃದಯ ತುಂಬಿ ಬಂದು ಅವನು ಹಾಡಿದ ಕುಣಿದ.
ಹೀಗೆ ಪ್ರಾಚೀನ ಕಾಲದಿಂದ ನೃತ್ಯ ಅವನ ಭಾವನೆಗಳನ್ನು ಹೊರಗೆಡಹುವ ಮಾಧ್ಯಮವಾಯಿತು. ಇದಕ್ಕೆ ಬೇಕಾದ ಲಯವು ಮಾನವನ ಜೀವನದಲ್ಲಿ ಹಾಸುಹೊಕ್ಕಾಗಿ ಬೆರೆತಿರುವ ಅಂಶ. ದೈಹಿಕ ಚಲನವಲನಗಳುಳ್ಳ ಅವನ ಹಲವಾರು ಕಾರ್ಯಕ್ರಮಗಳಲ್ಲಿ, ಒಂದು ಲಯ ಇದ್ದೇ ಇರುತ್ತದೆ. ಗಾಳಿಗೆ ತೂಗಾಡುವ ಗಿಡ ರೆಂಬೆಗಳನ್ನು, ಬಾಗಿ ಬಳುಕುವ ಹುಲ್ಲಿನ ಗರಿಕೆಗಳನ್ನು, ಹೀಗೆ ಪ್ರಕೃತಿ ಹಲವಾರು ಚಲನೆಗಳನ್ನು ನೋಡಿ ಅವುಗಳನ್ನು ಹಾವ ಭಾವಗಳಲ್ಲಿ ಮಾನವ ಅನುಕರಿಸಿದ್ದರಿಂದ ನೃತ್ಯ ಹುಟ್ಟಿತು ಎನ್ನಬಹುದು.
ಮನಸ್ಸಿನ ಭಾವನೆಗಳನ್ನು ತಿಳಿಸುವ ಕಲೆಯಾಗಿ ಹುಟ್ಟಿದ ನೃತ್ಯದಲ್ಲಿ ಮೈ ಹಾಗೂ ಕೈಕಾಲುಗಳ ಲಯಬದ್ಧ ಚಲನೆಗಳು ಮೊದಲಿಗೆ ಆರಂಭವಾದವು.
ಅನಂತರ ಕೈಗಳನ್ನು ತಟ್ಟುವುದು ಅಥವಾ ಸಂಗೀತದೊಡನೆ ಮೇಳೈಸಿ ನರ್ತಿಸುವುದು ಆಚರಣೆಗೆ ಬಂದಿತು. ಹಾಗೆಯೇ ಲಯಬದ್ಧ ಚಲನೆಗಳನ್ನು ಪುನರಾವರ್ತಿಸಿ ನರ್ತಿಸುವುದನ್ನು ಕಲಿಸುವ ಪದ್ಧತಿ ರೂಪುಗೊಂಡಿತು. ಬರಬರುತ್ತಾ ದುಷ್ಟ ಶಕ್ತಿಗಳನ್ನು ಸೋಲಿಸಲು, ದೇವರು ಪ್ರಸನ್ನನಾಗುವಂತೆ ಮಾಡಲು, ಯುದ್ಧದಲ್ಲಿ ವಿಜಯ ಪಡೆಯಲು ಹೀಗೆ ನೃತ್ಯ ಹಲವು ಉದ್ದೇಶಗಳ ಸಾಧನೆಯಾ ಮಾಧ್ಯಮವಾಯಿತು; ಹಲವು ಬಗೆಯಲ್ಲಿ ಬೆಳೆಯಿತು. ಪ್ರತಿಯೊಂದು ರಾಷ್ಟ್ರಕ್ಕೂ ವಿಶಿಷ್ಟವಾದ ನೃತ್ಯಗಳು ಆ ರಾಷ್ಟ್ರದ ವಿವಿಧ ಭಾಗಗಳಿಗೆ ವಿಶಿಷ್ಟವಾದ ಸುಷ್ಪಸ್ಟ ನೃತ್ಯ ಪ್ರಕಾರಗಳು ಹುಟ್ಟಿಕೊಂಡವು. ಎಲ್ಲಾ ರಾಷ್ಟ್ರಗಳ ನೃತ್ಯಗಳನ್ನು ಸಾಮಾನ್ಯವಾಗಿ ಮೂಲನಿವಾಸಿ ನೃತ್ಯ, ಜಾನಪದ ನೃತ್ಯ ಹಾಗೂ ಶಾಸ್ತ್ರೀಯ ನೃತ್ಯಗಳೆಂದು ವಿಂಗಡಿಸಬಹುದು. ಆಯಾ ಬುಡಕಟ್ಟಿಗೆ ಸಂಬಂಧಪಟ್ಟಂತೆ ವಿವಿಧ ಮೂಲ ನಿವಾಸಿ ನೃತ್ಯಗಳಿವೆ. ಭಾರತದಲ್ಲಿ ಪಂಜಾಬಿನ ಬಾಂಗ್ರಾ, ರಾಜಸ್ಥಾನದ ಘೂಮರ, ಮಹಾರಾಷ್ಟ್ರದ ಕೋಲೆ, ಗುಜರಾತಿನ ಗರ್ಭ, ಕೊಡಗಿನ ಉತ್ತರಿ ಮುಂತಾಗಿ ಅನೇಕ ಜಾನಪದ ನೃತ್ಯಗಳಿವೆ. ಶಾಸ್ತ್ರೀಯ ನೃತ್ಯದಲ್ಲಿ ಭರತನಾಟ್ಯ, ಕಥಕ್ಕಳಿ, ಕಥಕ್, ಮಣಿಪುರಿ ಇವು ಮುಖ್ಯ ವಿಧಗಳು. ಎಲ್ಲಾ ದೇಶದ ಹಾಗೆ ನಮ್ಮ ರಾಷ್ಟ್ರದ ನೃತ್ಯಗಳ ಮೇಲು ಆಧುನಿಕ ಜೀವನ ಪ್ರಭಾವ ಬೀರಿದೆ. ಶಾಸ್ತ್ರೀಯ ನೃತ್ಯದ ನಿಬಂಧನೆಗಳಿಂದ ಮುಕ್ತಗೊಂಡು ಸುಲಭ ಶೈಲಿಯ ನೃತ್ಯ ಪ್ರಕಾರಗಳು ಈಗ ಪ್ರಚಾರಕ್ಕೆ ಬಂದಿವೆ.
ವಿದೇಶಗಳ ಸಂಸ್ಕೃತಿಯಲ್ಲಿ ನಮಗೆ ತಿಳಿದಿರುವಂತೆ ಅತಿ ಪ್ರಾಚೀನ ನೃತ್ಯರೂಪ ಪುರಾತನ ಈಜಿಪ್ಟಿನದು. ಆಗಿನದು ನೈಲ್ ನದಿಯ ಏರಳಿತಗಳನ್ನು ಆಧರಿಸಿದ ಜೀವನಧಾರಣೆ. ಪ್ರತಿವರ್ಷ ಓಸೈರಸ್ ದೇವತೆಯ ಅಳಿವು, ಪುನರುತ್ಥಾನಗಳನ್ನು ಆ ಜನರು ನೃತ್ಯ ರೂಪದಲ್ಲಿ ಆಚರಿಸುತ್ತಿದ್ದರು. ಈ ಬಗೆಯ ಆರಾಧನೆ ದೇಗುಲಗಳಲ್ಲಿ ಆಗಿನ ಪ್ರಾಚೀನ ವೈದ್ಯನಿಂದ, ಮಾಂತ್ರಿಕನಿಂದ ನಡೆಯುತ್ತಿತ್ತು. "ತಾರೆಗಳ ನೃತ್ಯ" ಎಂಬ ಒಂದು ನೃತ್ಯವನ್ನು ದೇಗುಲದ ವೇದಿಕೆಯ ಸುತ್ತಲೂ ನಡೆಸುತ್ತಿದ್ದರು. ಫೆರೋ ದೊರೆಯೇ ಸ್ವತಃ ಆರಾಧನಾ ದೀಕ್ಷೆ ಪಡೆಯುವ ಮೊದಲು ನರ್ತಿಸುತ್ತಿದ್ದ. ತನ್ನ ಅತಿಥಿಗಳ ಮನೋರಂಜನೆಗಾಗಿ ಆತ ನೃತ್ಯಗಳನ್ನು ಏರ್ಪಡಿಸುತ್ತಿದ್ದ.
ಪ್ರಾಚೀನ ಗ್ರೀಸಿನ ವಿಶಿಷ್ಟ ನೃತ್ಯ ಪಾಶ್ಚಾತ್ಯ ನೃತ್ಯದ ತಳಹದಿ. ನೃತ್ಯ ಧಾರ್ಮಿಕಚಾರಣೆಗೆಂದು ಮಾತ್ರವೇ ಅಲ್ಲ ಒಂದು ಒಳ್ಳೆಯ ಹವ್ಯಾಸದಂತೆಯೂ ಬೆಳೆಯಿತು. ಚಿಕ್ಕಂದಿನಿಂದ ಹುಡುಗ ಹುಡುಗಿಯರಿಗೆ ನರ್ತನ ಹೇಳಿಕೊಡುತ್ತಿದ್ದರು. ಇದರಿಂದ ಅವರ ದೇಹ ಮನಸ್ಸುಗಳ ಸಾಮರಸ್ಯ ಸಾಧಿಸಬಹುದೆಂಬುದು ಅವರ ಅಭಿಪ್ರಾಯವಾಗಿತ್ತು. ಮದುವೆಯ ಸಮಾರಂಭಗಳಲ್ಲಿ, ದ್ರಾಕ್ಷಿಯ ಕುಯ್ಲು ಕಾಲದಲ್ಲಿ ಹಾಗೂ ತಮ್ಮ ಮನ ಸಂತೋಷಕ್ಕಾಗಿ ಗ್ರೀಸಿನ ಯುವಕ, ಯುವತಿಯರು ನರ್ತಿಸುತ್ತಿದ್ದರು. ಪ್ರಾಚೀನ ರೋಮನರು ಗ್ರೀಕರ ದೇವರುಗಳನ್ನು ಅಂಗೀಕರಿಸಿದಂತೆ, ಅವರ ನೃತ್ಯಗಳನ್ನು ತಮ್ಮದಾಗಿಸಿಕೊಂಡರು. ಬೆಳೆಯನ್ನು ಬಿತ್ತುವಾಗ, ಅಂತಿಮ ಕ್ರಿಯೆಯ ಸಮಯದಲ್ಲಿ ಅವರು ನರ್ತನಗಳನ್ನು ನಡೆಸುತ್ತಿದ್ದರು.
ಮಧ್ಯಯುಗದ ಯುರೋಪಿನಲ್ಲಿ ಯಾವುದೇ ಕಲೆ ಬೆಳೆಯಲು ತಕ್ಕ ವಾತಾವರಣವಿರಲಿಲ್ಲ. ಯುದ್ಧ, ಕ್ಷಮಾ, ಡಾಮರಗಳ ತಾಂಡವ ನಡೆದಿತ್ತು. ಈ ಕಾಲದ ಒಂದು ವಿಚಿತ್ರ ಬಗೆಯ ನರ್ತನವೆಂದರೆ "ಕೋರಿಯಾ ಮೇಜರ್" ಎಂಬುದು. ಅನೇಕರು ಕೆಲವೊಮ್ಮೆ ಸಹಸ್ರಾರು ಮಂದಿ ಒಂದು ಬಗೆಯ ವಿಚಿತ್ರ ಕುಣಿತದಲ್ಲಿ ಭಾಗವಹಿಸುತ್ತಿದ್ದರು. ಕೆಲವರಂತೂ ಕುಣಿದು ಕುಣಿದು ಬಳಲಿ ಪ್ರಾಣ ನೀಗುತಿದ್ದರು. ಕೆಟ್ಟು ಹೋದ "ರೈ" ಧಾನ್ಯದಿಂದ ಮಾಡಿದ ಬ್ರೇಡ್ ತಿಂದುದರಿಂದ ಇಂತಹದೊಂದು ಕುಣಿಯುವ ಕಾಯಿಲೆ ಹುಟ್ಟಿರಬಹುದು ಎಂಬ ಅಭಿಪ್ರಾಯವಿತ್ತು.
ಮೊದಮೊದಲು ಕ್ರೈಸ್ತ ಧರ್ಮಾಧಿಕಾರಿಗಳು ನರ್ತನವನ್ನು ನಿಷೇಧಿಸಿದರು. ಸುಮಾರು 13ನೇ ಶತಮಾನದಲ್ಲಿ ನಿಗೂಢ ನಾಟಕಗಳ ಅಂಗವಾಗಿ ಇದನ್ನು ಸ್ವೀಕರಿಸಿದರು. ಹೀಗೆ ನರ್ತನಕ್ಕೆ ಪೋಷಣೆ ದೊರೆತು ನವೋದಯ ಕಾಲದಲ್ಲಿ ಅದು ಬೆಳೆಯಲು ಆರಂಭಿಸಿತು. ಈ ವೇಳೆಗೆ ನೃತ್ಯ ಸಾಮಾಜಿಕ ಚಟುವಟಿಕೆಯಾಗಿತ್ತು. ಇಂಗ್ಲೆಂಡಿನಲ್ಲಿ ಔಪಚಾರಿಕ ಸಮಾರಂಭಗಳಲ್ಲಿ ರಾಜಮನೆತನದವರು ನರ್ತಿಸುತ್ತಿದ್ದರು. ಗಂಡು ಹೆಣ್ಣು ಇಬ್ಬರಿಗಾಗಿ ರಚಿತವಾದ ಹಿಂದೂ "ಸೊಸೈಟಿ ಡ್ಯಾನ್ಸ್ "ಎಂದು ಕರೆಯಲ್ಪಡುವ ನೃತ್ಯ ವಿಶೇಷಗಳು ಹುಟ್ಟಿಕೊಂಡವು. ಐತಿಹಾಸಿಕ ಅಥವಾ ಪೌರಾಣಿಕ ವ್ಯಕ್ತಿಗಳ ವೇಷ ಹಾಗೂ ಮುಖವಾಡಗಳನ್ನು ಧರಿಸಿ ನರ್ತಿಸುವುದು ಆರಂಭವಾಯಿತು. ವೈವಿಧ್ಯಪೂರ್ಣವಾದ ಈ ನೃತ್ಯವನ್ನು "ಮಾಸ್ಕರೇಡ್" ಎಂದು ಕರೆಯುತ್ತಾರೆ. ಇದೇ ಇಂದಿನ ಬ್ಯಾಲೆ ನೃತ್ಯದ ಉಗಮಕ್ಕೆ ಕಾರಣವಾಯಿತು. ಬ್ಯಾಲೆಯಂತೆ ಮಾಸ್ಕರೇಡ್ ಮೂಕಾಭಿನಯ ಪ್ರಧಾನ ನೃತ್ಯ.
ಇದಲ್ಲದೆ ಎಲ್ಲಾ ದೇಶಗಳಲ್ಲೂ ತಮ್ಮದೇ ಆದ ಜಾನಪದ ನೃತ್ಯಗಳಿವೆ. ಕತ್ತಿ ನೃತ್ಯ, ಮಾರಿಸ್ ನೃತ್ಯ, ಮುಂತಾದ ಜಾನಪದ ಕುಣಿತ ಇಂಗ್ಲೆಂಡಿನವು. ಗವಾಟ್ ಎಂಬ ಉಲ್ಲಾಸಪೂರಿತ ನೃತ್ಯ ಪ್ರಾನ್ಸ್ ನದು,
ಹಾಗೆಯೇ ಟಾರಂಟೆಲ ಇಟಲಿಯದು, ಸ್ಪೇನಿನ ಜೋಟ, ಬೊಲೆರೊ, ಹಂಗೇರಿಯಾ ಜಾರ್ಡ್ಸ್, ಐರ್ಲೆಂಡಿನ ಜಿಗ್ಸ್, ಸ್ಕಾಟ್ಲೆಂಡಿನ ರೀಲ್, ಡೆನ್ಮಾರ್ಕಿನ ಕ್ರೆಸ್ಟೆಡ್ ಹೆನ್, ಜರ್ಮನಿಯ ಸೀಬೆನ್ ಸ್ಕ್ರಿಟ್, ಪೋಲೆಂಡಿನ ಮಜೂರ್ಕ, ಯುರೋಪಿನ ರಾಷ್ಟ್ರಗಳಲ್ಲಿ ಹೆಸರಾದವು.
ರಷ್ಯಾದಲ್ಲಿ ಯುಕ್ರೇನಿನ ಗೋಪಕ್, ಕಾಕಸಿಸ್ ನ ಲೆಜಗಿಂಕಗಳು ಪ್ರಖ್ಯಾತವಾದವು. ಲ್ಯಾಟಿನ್ ಅಮೆರಿಕ ಕ್ಯಾರಿಬಿಯನ್ ದ್ವೀಪಗಳಲ್ಲೂ ಉತ್ತರ ಅಮೆರಿಕದಲ್ಲೂ ಪ್ರತಿಯೊಂದು ಪ್ರದೇಶಕ್ಕೂ ವಿಶಿಷ್ಟವಾದ ನೃತ್ಯಗಳಿವೆ. ಏಷ್ಯದಲ್ಲಿ ಬುದ್ಧನ ಉತ್ಸವ ಆಚರಿಸುವಾಗ ನಡೆಸುವ ನೃತ್ಯ ಅವರಿಗೆ ವಿಶಿಷ್ಟವಾದದ್ದು. ಬರ್ಮಿಯರನ್ನು
ನತ್ ಪ್ವೆ, ಥೈಲ್ಯಾಂಡಿನ ಖಾನ್, ಲಾಕನ್, ಫಿಲಿಫೈನ್ಸ್ ನ ಮೇಣಬತ್ತಿ ನೃತ್ಯಗಳನ್ನೂ ಇಲ್ಲಿ ಹೆಸರಿಸಬಹುದು.
ಕಾಂಬೋಡಿಯದ ನೃತ್ಯ ಸಂಪ್ರದಾಯ ದೀರ್ಘಕಾಲದಿಂದ ನಡೆದು ಬಂದದ್ದು. ಇಲ್ಲಿಯ ಹುಡುಗಿಯರು ಎಳೆಯ ವಯಸ್ಸಿನಲ್ಲಿ ನೃತ್ಯ ಕಲಿಯಲು ಆರಂಭಿಸುತ್ತಾರೆ. ಬಾಲಿ ದ್ವೀಪದ ನೃತ್ಯ ಸಂಪ್ರದಾಯವು ಪ್ರಾಚೀನವಾದದ್ದು. ಅಂತರಾಷ್ಟ್ರೀಯ ಖ್ಯಾತಿಯುಳ್ಳದ್ದು. ಇಲ್ಲಿನ ಅತ್ಯಂತ ಪ್ರಸಿದ್ಧ ನೃತ್ಯ ಲೆಗಾಂಗ್ ದೇವಾಲಯಗಳಲ್ಲಿ ಕನ್ಯೆಯರು ಮಾಡುವಂತದ್ದು. ಚೀನಾದ ಚಕ್ರವರ್ತಿಗಳ ಆಡಳಿತ ಕೊನೆಗೊಂಡಾಗ ಅಲ್ಲಿನ ವಿಧಿವತ್ತಾದ ಹಳೆಯ ನೃತ್ಯ ರೂಪಗಳು ಮೂಲೆಪಾಲಾದುವು. ಆದರೆ ಚೀನಾದ ನಾಟಕ ರಂಗದಲ್ಲಿ ನೃತ್ಯ ಒಂದು ಅನಿವಾರ್ಯ ಅಂಶ. ಇತ್ತೀಚಿನ ಕಾಲದಲ್ಲಿ ಪ್ರಾಚೀನ ನೃತ್ಯ ವಿಧಾನಗಳ ಪುನರ್ಜೀವನ ನಡೆದಿದೆ. ಜಪಾನಿನ ಅತ್ಯಂತ ಹಳೆಯ ನರ್ತನ ಪ್ರಕಾರ ಬುಗಾಕು. ಅಲ್ಲಿನ "ನೋ" ನಾಟಕ ಹಾಗೂ "ಕಬೂಕಿ" ನಾಟಕಗಳಲ್ಲಿ ಈ ಶೈಲಿ ಉಳಿದುಕೊಂಡಿದೆ.
ಆಧುನಿಕ ಪಾಶ್ಚಾತ್ಯ ನೃತ್ಯಗಳಲ್ಲಿ "ಬಾಲ್ ರೂಮ್" ನೃತ್ಯ ಬಹಳ ಜನಪ್ರಿಯವಾದದ್ದು. ಅರಮನೆಗಳಲ್ಲಿ, ಶ್ರೀಮಂತರ ಭವನಗಳಲ್ಲಿ ಇದು ಆರಂಭವಾಯಿತು. ನಡಿಗೆಯನ್ನು ಹೋಲುವ ಹೆಜ್ಜೆಯ ಸರಳ ಚಲನೆಯಂತೆ ಇದು ಮೊದಲಾಯಿತು. ಇಂದು ತೊಡಕಾದ ಹೆಜ್ಜೆಯ ಕುಣಿತ ಇದರ ಅಂಗವಾಗಿದೆ. ವಾಲ್ಟ್ಸ್, ಫಾಕ್ಸ್ ಟ್ರಾಟ್, ರಂಬಾ, ಟಾಂಗೊ, ರಾಕ್ ಅಂಡ್ ರೋಲ್ ಮುಂತಾದವು ಬಾಲ್ ರೂಮ್ ನೃತ್ಯದ ಹೆಸರಾಂತ ಬಗೆಗಳು. ಈ ಶತಮಾನದಲ್ಲಿ ಸಾಮಾಜಿಕ ಮನೋರಂಜನೆಗಾಗಿ ಈ ನೃತ್ಯಗಳು ರೂಪುಗೊಂಡವು. ಟಾಪ್ ಹಾಗೂ ಚಾಚಾ ನೃತ್ಯಗಳು ಆಧುನಿಕ ಆಕರ್ಷಕ ನೃತ್ಯ ಮಾದರಿಗಳು.
ನೃತ್ಯವೆಂದರೆ ಅದರ ಹಿನ್ನೆಲೆಯಾದ ಸಂಗೀತದ ಆವರ್ತಗಳಿಗೆ ಸರಿಯಾಗಿ ನಮ್ಮ ಚಲನೆಯನ್ನು ಅಳವಡಿಸಿಕೊಂಡರಾಯಿತು ಎಂಬ ಭಾವನೆ ಜನಸಾಮಾನ್ಯರಲಿದೆ. ಆದರೆ ನರ್ತಿಸುವವರಿಗೆ ಒಳ್ಳೆಯ ಲಯಜ್ಞಾನ ಇರಬೇಕು. ಈ ಲಯ ಎಲ್ಲರಿಗೂ ಸಹಜವಾಗಿ ಅನುಭವಕ್ಕೆ ಬರುವಂತದ್ದು. ಮನುಷ್ಯನಿಗೂ ಪ್ರಕೃತಿಗೂ ಇರುವ ಬಾಂಧವ್ಯವನ್ನೊ ಅವನ ಬೌದ್ಧಿಕ ಅನುಭವಗಳನ್ನೂ ನೃತ್ಯ ಸೂಚಿಸುತ್ತದೆ.
ಉದಂತ ಶಿವಕುಮಾರ
ಲೇಖಕ, ಬೆಂಗಳೂರು-560056
ಮೊ:9739758558
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
